Thursday, 2 June 2011

ಮೈ ಮನಗಳ ಸುಳಿಯಲ್ಲಿ



ಶಿವರಾಮ ಕಾರಂತರ ’ಮೈ ಮನಗಳ ಸುಳಿಯಲ್ಲಿ’ ಕಾದಂಬರಿಯ ನಾಯಕಿ ಮಂಜುಳ ವೃತ್ತಿಯಿಂದ ಪರಂಪರಾಗತ ವೇಶ್ಯೆಯಾದರೂ ಸಂಸ್ಕಾರವಂತ ಹೆಣ್ಣುಮಗಳು. ಅವಳು ಒಂದೆಡೆ ಹೇಳುತ್ತಾಳೆ, ’ಪ್ರಣಯದಲ್ಲಿ ಗಂಡು ಹೆಣ್ಣು ಇಬ್ಬರೂ ಯಾಚಕರೇ! ಬಿಕ್ಷೆ ನೀಡುವವರೂ ಪರಸ್ಪರ ಅವರೇ.ಇಲ್ಲಿ ಒಬ್ಬರು ಕೀಳಲ್ಲ; ಇನ್ನೊಬ್ಬರು ಮೇಲಲ್ಲ.’

ಸರ್ವಸಂಗ ಪರಿತ್ಯಾಗಿಯಾದ ಸನ್ಯಾಸಿಯೊಬ್ಬ  ಮೋಹಪರವಶನಾಗಿ ಮಂಜುಳೆಯ ಬಳಿ ಬರುತ್ತಾನೆ. ಆತನ ದೇಹ ಅವಳಿಗೆ ಒಂದು ಹೊಸ ವೀಣೆಯಂತೆ ಭಾಸವಾಗುತ್ತದೆ. ಆಕೆಯೇ ತಂತಿಯ ಬಿರಡೆ ಬಿಗಿದು ಶ್ರುತಿಗೆ ಅಣಿಗೊಳಿಸುತ್ತಾಳೆ.
ಆತ ಅನನುಭವಿ. ಅದನ್ನು ಆಕೆ ಹೀಗೆ ವರ್ಣಿಸುತ್ತಾಳೆ; ’ನನ್ನ ಕೈಗೆ ಬಂದ ಆ ಕೋಮಲವೂ ಅಲ್ಲದ ದೇಹದಲ್ಲಿ ಎಲ್ಲೆಲ್ಲಿ ಧ್ವನಿ ಹೊರಡಿಸುವ ಮೆಟ್ಟಿಲುಗಳು ನಿಂತಿವೆ, ಯಾವಲ್ಲಿ ಮೀಂಟಿದರೆ ನನ್ನ ಆಸೆಗೆ ತಣಿವಾದೀತು-ಎಂದು ಅರಸಿ, ನುಡಿಸಿ, ನಲಿದೆ.ಅದೊಂದು ಮಾನವ ದೇಹವೇ ಅನಿಸಲಿಲ್ಲ ನನ್ನ ಪಾಲಿಗೆ;ನಿಜಕ್ಕೂ ಒಂದು ವೀಣೆ ಅನಿಸಿತು! ಒಂದೊಂದು ಮಿಡಿತವೂ ನನ್ನ ಕಿವಿಯನ್ನು ನಾದದಿಂದ ತುಂಬಿ ನಲಿಸಿತು. ಅವರ ಯಾವ ಮಾತೂ ನನಗೆ ಬೇಕೆನಿಸಲಿಲ್ಲ. ನನ್ನ ಮೈಯೆಲ್ಲವೂ ನಾಲಿಗೆಯಾಗಿತ್ತು.; ಅದೇ ಕಿವಿಯಾಗಿತ್ತು. ಅವರ ಪಾಲಿಗೆ ನನ್ನ ದೇಹ ಹೇಗೆನಿಸಿತೋ ಹೇಳಲಾರೆ. ನನಗದು ರಸದೂಟವಾಗಿತ್ತು. ಆ ವೀಣೆ ನನಗೆ ಒಲಿದಂತೆ,ನಾನು ಸಹ ಒಲಿದಿರಲಾರೆನೇ? ಆ ಘಳಿಗೆಯು ಬಂದಾಗ ನಾನು ನಾನಾಗಿರಲಿಲ್ಲ. ಕಡಲಲ್ಲಿ ಕರಗಿದ ಒಂದು ಉಪ್ಪಿನ ಗೊಂಬೆಯಾಗಿದ್ದೆ'
ಸಾಮಾನ್ಯ ಸಂದರ್ಭಗಳಲ್ಲಿ ಮನಸ್ಸೇ ಬೇರೆಯಾಗಿರುತ್ತದೆ.ದೇಹವೇ ಬೇರೆಯಾಗಿರುತ್ತದೆ. ಅವೆರಡೂ ಅವುಗಳ ಪರಿಮಿತಿಯಲ್ಲೇ ವ್ಯವರಿಸುತ್ತದೆ.ಆದರೆ ಅವೆರಡೂ ಒಂದಾಗಿ ಏಕೀಭವಿಸುವ  ಕ್ಷ್ಣಣವೇ ಗಂಡು ಹೆಣ್ಣಿನ ಮಿಲನ. ಮಂಜುಳೆಗೆ ಅಂದು ಅದು ಸಿದ್ಧಿಸಿತ್ತು.

ದೇಹ ವೀಣೆಯನ್ನು ಮೀಟುವುದೂ ಒಂದು ಕಲೆ. ವೀಣೆಯಲ್ಲಿ ಸ್ವರ ಸ್ಥಾಯಿಗಳನ್ನು ಅಭ್ಯಾಸಿಸಿ ನಾದವನ್ನು ಹೊಮ್ಮಿಸಿ ಭಾವ ಪರವಶವಾದಂತೆ ದೇಹ ವೀಣೆಯಲ್ಲಿ ರಸಸ್ಥಾಯಿಗಳನ್ನು ಗುರುತಿಸಿಕೊಂಡು ಅದನ್ನು ಮೀಟುತ್ತಾ ಬ್ರಹ್ಮಾನಂದವನ್ನು ಹೊಂದಬೇಕು. ಮಂಜುಳೆಯ ಮಿಲನದಲ್ಲಿ ಆ ಆನಂದವನ್ನು ಅನುಭವಿಸಿದ ಆ ಗುರು, ಮಂಜುಳೆಯನ್ನು ಅಪ್ಪಿಕೊಂಡು ಕಣ್ಣೀರು ಸುರಿಸುತ್ತಾ, ’ಸಮಾಧಿ ಸ್ಥಿತಿ ಹೇಗಿದ್ದೀತು ಎಂಬುದನ್ನು ತೋರಿಸಿದ ಗುರು ನೀನು’ ಎಂದು ಭಾವಪರವಶವಾಗುತ್ತಾರೆ.

ನಿಸರ್ಗವೇ ಗಂಡು ಹೆಣ್ಣಿನ ದೇಹಗಳನ್ನು ಅಪೂರ್ಣವಾಗಿ ಸೃಷ್ಟಿಸಿದೆ. ಅವು ಪರಸ್ಪರ ಪೂರ್ಣತ್ವಕ್ಕಾಗಿ ತುಡಿಯುತ್ತವೆ. ಪೂರ್ಣತ್ವದೆಡೆಗಿನ ಪಯಣದ ಹಾದಿ ಸುಗಮವಾಗಬೇಕಾದರೆ ಆ ಹಾದಿಯ ಪೂರ್ವ ಪರಿಚಯವನ್ನು ಸ್ವಲ್ಪ ಮಟ್ಟಿಗಾದರೂ ಮಾಡಿಕೊಳ್ಳಬೇಕು. ಆ ಪ್ರಯತ್ನವೇ ’ದೇಹವೀಣೆ’”
’ದೇಹ ವೀಣೆ’ ಕೇವಲ ಲೈಂಗಿಕ ಸಮಸ್ಯೆಗಳಿಗೆ ಮಾತ್ರ ಸ್ಪಂದಿಸುವುದಿಲ್ಲ. ಯಾಕೆಂದರೆ ದೇಹ ವೀಣೆಯನ್ನು ಮೀಟಿದಾಗ ಅನೇಕ ಭಾವಗಳು ಹೊರಹೊಮ್ಮುತ್ತವೆ; ಪ್ರೀತಿ, ಭಯ, ಸಂತೋಷ, ತೃಪ್ತಿ, ಅನುರಾಗ, ಒಲುಮೆ ಮುಂತಾದ ಮೃದು ಭಾವನೆಗಳು ಸಂಚಲನಗೊಳ್ಳಬಹುದು. ಹಾಗೆಯೇ ಕೋಪ, ದ್ವೇಷ, ಕ್ರೌರ್ಯದಂಥ ರೂಕ್ಷ ಭಾವನೆಗಳು ಜಾಗೃತಗೊಳ್ಳಬಹುದು. ಅದನ್ನೆಲ್ಲಾ  ನಿಗ್ರಹಿಸಲಾರದೆ ಮನಸ್ಸು ದಣಿದುಹೋಗಬಹುದು.ಅಂಥ ಭಾವನೆಗಳ ತಾಕಲಾಟದಲ್ಲಿ ಹಲವರು ಬದುಕಿನ ಭರವಸೆಯನ್ನೇ ಕಳೆದುಕೊಳ್ಳಬಹುದು. ಅಂಥವರು ;ದೇಹ ವೀಣೆ’ಯಲ್ಲಿ ಬಂದು ತಮ್ಮ ದುಃಖವನ್ನು ಹೇಳಿಕೊಂಡು ಸಾಂತ್ವನವನ್ನು ಪಡೆಯುವ ಪ್ರಯತ್ನ ಮಾಡಬಹುದು.

’ದೇಹವೀಣೆ’ ಸಂವಾದದ ಮಾದರಿಯಲ್ಲಿರುತ್ತದೆ. ಓದುಗರ ಸಂದೇಹ, ಆತಂಕ, ಚಿಂತೆ, ವ್ಯಾಕುಲತೆ ಇತ್ಯಾದಿ ಮನೋಗ್ಲಾನಿಗಳಿಗೆ ಸಮಾಧಾನವನ್ನು ನೀಡುವ ಪ್ರಯತ್ನವನ್ನು ಇದು ಮಾಡುತ್ತದೆ.
ತುಂಬಾ ಜವಾಬ್ದಾರಿಯನ್ನು ಬೇಡುವ ಇಂಥದೊಂದು ಬ್ಲಾಗ್ ನಡೆಸಲು ನಿನಗಿರುವ ಯೋಗ್ಯತೆ ಏನು ಎಂದು ನೀವು ಕೇಳಬಹುದು.  ನನಗೆ ಗೊತ್ತಿದೆ; ಇದು ತುಂಬಾ ರಿಸ್ಕ್. ಈ ರಿಸ್ಕ್ ತೆಗೆದುಕೊಳ್ಳಲು ನಾನು ಸಿದ್ಧವಾಗಿದ್ದೇನೆ. ನಾನು ಮೆಂಟಲ್ ಹೆಲ್ತ್ ಆಪ್ತ ಸಮಾಲೋಚನೆಯಲ್ಲಿ ಡಿಪ್ಲೋಮಾ ಮಾಡಿದ್ದೇನೆ. ಇದೀಗ ’ಲೈಂಗಿಕ ಸಮಸ್ಯೆಗಳು’ ಎಂಬ ವಿಷಯದಲ್ಲಿ ಆಪ್ತ ಸಮಾಲೋಚನೆ ತರಬೇತಿ ಪಡೆಯುತ್ತಿದ್ದೇನೆ. ಅಲ್ಲಿ ಕಂಡು ಬರುತ್ತಿರುವ ಸಮಸ್ಯೆಗಳ ವೈವಿಧ್ಯತೆಯನ್ನು ಕಂಡು, ಕೇಳಿ ಬೆರಗಾಗಿದ್ದೇನೆ. ಅದರ ಹಿನ್ನೆಲೆಯಲ್ಲಿ ನಾನು ಈ ಬ್ಲಾಗ್ ಆರಂಭಿಸುತ್ತಿದ್ದೇನೆ. ನನ್ನೊಡನೆ ಪರಿಣಿತರ ತಂಡವಿದೆ.

ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಇದು ಲೈಂಗಿಕ ಶಿಕ್ಷಣವನ್ನು ತಿಳಿಸುವ, ಹೇಳುವ ಎಲ್.ಕೆ.ಜಿ ಕ್ಲಾಸ್. ಲೈಂಗಿಕ ಶಿಕ್ಷಣ ಎಂದರೆ ಗಂಡು ಹೆಣ್ಣಿನ ಮಿಲನವನ್ನು ಹಸಿ ಹಸಿಯಾಗಿ ಹೇಳುವುದು ಎಂದು ಅನೇಕರು ತಿಳಿದಿದ್ದಾರೆ. ಅದಕ್ಕಾಗಿಯೇ ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ಕೊಡುತ್ತೇವೆಂದು ಸರಕಾರ ಅಂದಾಗ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಇದು ತಪ್ಪು. ಲೈಂಗಿಕ ಶಿಕ್ಷಣವೆಂದರೆ ಸ್ತೀ ಮತ್ತು ಪುರುಷ ದೇಹ ರಚನೆಗಳನ್ನು ತಿಳಿಸಿಕೊಡುವುದು. ಒಂದು ರೀತಿಯಲ್ಲಿ ಇದು ಬಯಾಲಾಜಿಯ ಕ್ಲಾಸಿದ್ದಂತೆ. ಪರಸ್ಪರ ಆಕರ್ಷಣೆ ಮತ್ತು ಅದರಿಂದಾಗುವ ತೊಂದರೆಗಳು, ಅದಕ್ಕಿರುವ ನಿವಾರಣೋಪಾಯಗಳ ಬಗೆಗೆ ತಿಳಿಸಿಕೊಡುವುದೇ ಲೈಂಗಿಕ ಶಿಕ್ಷಣದ ಉದ್ದೇಶವಾಗಿದೆ.
ಮೇಲಿನ ಎಲ್ಲಾ ಅಂಶಗಳನ್ನು ಮನದಲ್ಲಿಟ್ಟುಕೊಂಡು ಈ ಬ್ಲಾಗನ್ನು ಆರಂಭಿಸಲಾಗಿದೆ. ಇದನ್ನು ಆರೋಗ್ಯಕಾರಿಯಾಗಿ ಮುನ್ನಡೆಸುವ ಜವಾಬ್ದಾರಿಯಲ್ಲಿ ನಿಮ್ಮ ಪಾಲು ಬಹು ದೊಡ್ಡದು. ಬನ್ನಿ, ನಿಮ್ಮ ಸಲಹೆ, ಸಂದೇಹಗಳನ್ನು ನಮ್ಮೊಡನೆ ಹಂಚಿಕೊಳ್ಳಿ; ಸಂವಾದದಲ್ಲಿ ಭಾಗವಹಿಸಿ. ನಿಮ್ಮ ಸಂದೇಹಗಳಿಗೆ ನಮ್ಮ ಪರಿಣಿತ ಪಡೆಯ ಸಹಾಯದಿಂದ ಉತ್ತರಿಸುವ ಪ್ರಯತ್ನ ಮಾಡಲಾಗುವುದು.

ಒಬ್ಬ ಗೈನಕಾಲಾಜಿಸ್ಟ್, ಒಬ್ಬ ಯೂರಲಾಜಿಸ್ಟ್, ಇನ್ನೊಬ್ಬ ನರರೋಗತಜ್ನ ಹಾಗು ಒಬ್ಬ ಸೈಕಾಲಾಜಿಸ್ಟ್- ಇಷ್ಟು ಜನರ ತಂಡವೇ ಸಾಕು ನಿಮ್ಮ ಬಹಳಷ್ಟು ಸಮಸ್ಯೆಗಳನ್ನು ಪರಿಹರಿಸಲು. ಅ ತಂಡದ ಸಂಪರ್ಕ ನನಗಿದೆ. ಆದರೆ ದಯವಿಟ್ಟು ’ದೇಹವೀಣೆ’ಯನ್ನು ’ಅಟ್ಟದ ಮೇಲಿನ ಡಾಕ್ಟರ್’ ಎಂದು ಭಾವಿಸಬೇಡಿ. ಸ್ವಸ್ಥ ಸಮಾಜದ ಸೃಷ್ಟಿಗೆ ಅರೋಗ್ಯವಂತ ಮನಸ್ಸುಗಳ ಅವಶ್ಯಕತೆ ತುಂಬಾ ಇದೆ. ಅದನ್ನು ನಾವೆಲ್ಲಾ ಸೇರಿಯೇ ಕಟ್ಟುವ ಪ್ರಯತ್ನ ಮಾಡೋಣ.